ನಾಕ್ಟುಯಿಡೀ -
ಸಂದಿಪದಿ ವಂಶ ಕೀಟ ವರ್ಗ, ಲೆಪಿಡಾಪ್ಟರ ಗಣಕ್ಕೆ ಸೇರಿದ ಅತ್ಯಂತ ದೊಡ್ಡ ಕುಟುಂಬ; ಸುಮಾರು 500 ಜಾತಿಯ ಪತಂಗಗಳನ್ನು ಒಳಗೊಂಡಿದೆ. ಪ್ರಭೇದಗಳ ಸಂಖ್ಯೆ 20,000. ಪ್ರಪಂಚಾದ್ಯಂತ ಕಂಡುಬರುವ ಇವು ಉತ್ತರ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ. ವಯಸ್ಕ ಕೀಟಗಳನ್ನು ಸಾಮಾನ್ಯವಾಗಿ ಹಾಲಕ್ಕಿ ಪತಂಗಗಳೆಂದು (ಔಲೆಟ್ ಮಾತ್ಸ್) ಕರೆಯುತ್ತಾರೆ. ಇವುಗಳ ಲಾರ್ವಗಳಿಗೆ (ಡಿಂಬ) ಸೈನಿಕ ಹುಳು (ಆರ್ಮಿವರ್ಮ್) ಮತ್ತು ಕತ್ತರಿಹುಳು (ಕಟ್‍ವರ್ಮ್) ಎಂಬ ಸಾಮಾನ್ಯ ಹೆಸರುಗಳಿವೆ. ಅಪರಿಮಿತ ಸಂಖ್ಯೆಯ ಸೈನ್ಯದೋಪಾದಿಯಲ್ಲಿ ಸ್ಥಳದಿಂದ ಸ್ಥಳಕ್ಕೆ ಸಾಗುತ್ತ ಪೈರು ಸಸ್ಯಗಳ ಎಲೆಗಳನ್ನು ಕತ್ತರಿಸಿ ತಿನ್ನುತ್ತ ಅಪಾರ ಹಾನಿ ಉಂಟುಮಾಡುವುದರಿಂದ ಇವಕ್ಕೆ ಈ ಹೆಸರುಗಳು ಅನ್ವರ್ಥವಾಗಿವೆ.

	ಈ ಕುಟುಂಬದ ಸದಸ್ಯ ಕೀಟಗಳು ಹಾಗೂ ಲಾರ್ವಗಳು ಬಹುತೇಕವಾಗಿ ನಿಶಾಚರಿಗಳು ಇಲ್ಲವೆ ಮುಸ್ಸಂಜೆಯಲ್ಲಿ ಓಡಾಡುವಂಥವು. ಕುಟುಂಬದ ಹೆಸರಿಗೆ ಈ ಗುಣವೇ ಕಾರಣ. ಹೆಚ್ಚಿನ ಸಂಖ್ಯೆಯ ಕೀಟಗಳು ರಾತ್ರಿ ಕಾಲದಲ್ಲಿ ದೀಪದ ಬೆಳಕಿನಿಂದ ಆಕರ್ಷಿತವಾಗುತ್ತವೆ. ಇವುಗಳ ಗಾತ್ರದಲ್ಲೂ ಬಣ್ಣದಲ್ಲೂ ವೈವಿದ್ಯವಿದೆಯಾದರೂ ಹೆಚ್ಚಿನವು ಮಧ್ಯಮಗಾತ್ರದವು (ರೆಕ್ಕೆ ಹರಡಿದಾಗ ಇವು ಸಾಧಾರಣವಾಗಿ 2.5-5.0 ಸೆಂ.ಮೀ. ಅಗಲ ಇರುವುವು), ಬಣ್ಣ ಸಾಮಾನ್ಯವಾಗಿ ಮಾಸಲು. ಇದರಿಂದಾಗಿ ಪತಂಗಗಳು ತಮ್ಮ ಪರಿಸರದ ಬಣ್ಣದೊಂದಿಗೆ ಹೊಂದಿಕೊಂಡು ಶತ್ರುಗಳಿಂದ ತಪ್ಪಿಸಿಕೊಳ್ಳಲು ಸಹಾಯಕವಾಗಿವೆ. ಇವುಗಳ ಮುಖ್ಯಲಕ್ಷಣಗಳು ಇಂತಿವೆ: ಮೋಟಾದ ಹಾಗೂ ದೃಢವಾದ ಕಾಯವುಳ್ಳವು. ಮೈಮೇಲೆ ಹುರುಪೆ ಹಾಗೂ ಕೂದಲುಗಳು ಉಂಟು. ಇರುವ ಎರಡು ಜೊತೆ ರೆಕ್ಕೆಗಳಲ್ಲಿ ಹಿಂದಿನವು ಮುಂದಿನವುಕ್ಕಿಂತ ಅಗಲವಾಗಿವೆ. ತಲೆ ಚಿಕ್ಕ ಗಾತ್ರದ್ದು. ಕಣ್ಣುಗಳು ದೊಡ್ಡವು. ಹೀರುಕೊಳುವೆ ಚೆನ್ನಾಗಿ ರೂಪುಗೊಂಡಿವೆ. ಅಪರೂಪಕ್ಕೆ ಇಲ್ಲದೆಯೂ ಇರಬಹುದು. ಕೆಳದುಟಿಯ ಸ್ಪರ್ಶಾಂಗಗಳು (ಲೇಬಿಯಲ್ ಪ್ಯಾಲ್ಪಿ) ಸಾಮಾನ್ಯವಾಗಿ ಉದ್ದವಾಗಿವೆ. ಸ್ಪರ್ಶಾಂಗಗಳು (ಆಂಟೆನೀ) ಸಾಧಾರಣವಾಗಿ ಸರಳ ಕೊಳವೆಯಂತಿವೆ. ಇವು ಕೆಲವೊಮ್ಮೆ ರೋಮಾವೃತವಾಗಿರಬಹುದು. ವಕ್ಷ ಭಾಗ ದೊಡ್ಡದು. ಬೆನ್ನಮೇಲಿನ ಹುರುಪೆ ಗುಚ್ಛಗಳ ರೀತಿ ಜೋಡಣೆಗೊಂಡಿರುವುದುಂಟು. ಅಂತೆಯೇ ಉದರದ ಹಿಂತುದಿಯಲ್ಲೂ ರೋಮಗಳ ಗುಚ್ಛಗಳಿರುವುದುಂಟು. ಪತಂಗಗಳು ಹಾರುವಾಗ ಮುಂದಿನ ಹಾಗೂ ಹಿಂದಿನ ರೆಕ್ಕೆಗಳು ಜೊತೆಯಾಗಿರಲು ಸಹಾಯಕವಾಗುವ ಅಂಗವಾದ ಫ್ರೆನ್ಯುಲಮ್ ಎಂಬುದು ಇವುಗಳಲ್ಲಿ ಚೆನ್ನಾಗಿ ರೂಪುಗೊಂಡಿದೆ. ಈ ಕುಟುಂಬದ ಪತಂಗಗಳ ಉದರದ ಬುಡಭಾಗದಲ್ಲಿ ತೆಳುವಾದ ಪರೆಯಂಥ ಶ್ರವಣೇಂದ್ರಿಯಗಳುಂಟು. ಇವುಗಳ ಸಹಾಯದಿಂದ ಈ ಕೀಟಗಳು ಸೆಕೆಂಡಿಗೆ 3-100 ಕಿಲೊಸೈಕಲ್ಲುಗಳ ಆಪರ್ತಾಂಕಗಳನ್ನು ಗುರುತಿಸಬಲ್ಲವೆನ್ನಲಾಗಿದೆ. ಇದರಿಂದಾಗಿ ಬಾವಲಿಗಳಂಥ ಶತ್ರುಗಳಿಂದ (ಬಾವಲಿಗಳು ಕೆಲವೊಮ್ಮೆ ಸೆಕೆಂಡಿಗೆ 80 ಕಿಲೊಸೈಕಲ್ಲುಗಳಷ್ಟು ತೀವ್ರವಾದ ಆವರ್ತಾಂಕಗಳನ್ನು ಹೊರಸೂಸಿ ತಮ್ಮ ಎರೆಗಳನ್ನು ಕಂಡುಕೊಳ್ಳುವುವು) ಇವು ತಮ್ಮನ್ನು ರಕ್ಷಿಸಿಕೊಳ್ಳುವುವು. ಇವುಗಳ ಮೊಟ್ಟೆಗಳು ಚಂಡಿನಂತೆ ಇಲ್ಲವೆ ಕೊಂಚ ಚಪ್ಪಟೆಯಾದ ಚಂಡಿನಂತಿವೆ. ಮೇಲ್ಭಾಗದಲ್ಲಿ ಒಂದು ಕಿರುಮುಚ್ಚಳವಿರುವುದುಂಟು. ಮೊಟ್ಟೆಗಳ ಹೊರಮೈಮೇಲೆ ಉದ್ದ ಗೀರುಗಳಿರುವುವು. ಬಣ್ಣ ಮಾಸಲು ಕೆನೆ ಇಲ್ಲವೆ ಹಸುರು. ಮೊಟ್ಟೆಗಳನ್ನು ನೂರಾರು ಇಲ್ಲವೆ ಸಾವಿರಾರು ಸಂಖ್ಯೆಯಲ್ಲಿ ಆತಿಥೇಯ ಸಸ್ಯಗಳ ಮೇಲೆ ಅಥವಾ ಲಾರ್ವಗಳಿಗೆ ಅನುಕೂಲವಾಗುವಂಥ ನೆಲೆಗಳಲ್ಲಿ ಇಡುವುವು. ಲಾರ್ವಗಳು ಉರುಳೆಯಾಕಾರದವು. ಮೈ ರೋಮರಹಿತವಾಗಿರುವುದೇ ಸಾಮಾನ್ಯವಾದರೂ ಕೆಲವು ಬಗೆಗಳ ಲಾರ್ವಗಳ ಮೈಮೇಲೆ ನಯವಾದ ಕೂದಲುಗಳಿರುವುದುಂಟು. ಇವುಗಳಲ್ಲಿ ಬಿರುಗೂದಲುಗಳೂ (ಸೀಟೀ) ಇವೆ. ಇವುಗಳಿಗೆ ಸಾಮಾನ್ಯವಾಗಿ ಐದು ಜೊತೆ (ಮಿಥ್ಯಾಪಾದ) ಹುಸಿಗಾಲುಗಳಿವೆ (ಪ್ರೋಲೆಗ್ಸ್). ಆದರೆ ಕ್ಯಾಟೊಕ್ಯಾಲೈನೀ. ಪ್ಲೂಸೈಯಿನೀ ಮತ್ತು ಹೈಪೆನಿನೀ ಉಪಕುಟುಂಬಗಳಿಗೆ ಸೇರಿದ ಲಾರ್ವಗಳ ಮೊದಲ ಇಲ್ಲವೆ ಮೊದಲ ಹಾಗೂ ಎರಡನೆಯ ಜೋಡಿ ಮಿಥ್ಯಾಪಾದಗಳು ಕ್ಷೀಣ ಸ್ಥಿತಿಯಲ್ಲಿರುವುದರಿಂದ ಲಾರ್ವಗಳು ಅರೆಕುಣಿಕೆ ರೀತಿಯಲ್ಲಿ (ಸೆಮಿಲೂಪರ್ಸ್) ಚಲಿಸುವುವು. ಲಾರ್ವಗಳು ಸಸ್ಯಾಹಾರಿಗಳು; ಮೊದಲೇ ಹೇಳಿದಂತೆ ಕೃಷಿ ಬೆಳೆಗಳನ್ನು ತಿಂದು ಜೀವಿಸುತ್ತವೆ. ಕೆಲವು ಪ್ರಭೇದಗಳು ಎಲೆಗಳನ್ನು ಕತ್ತರಿಸಿ ತಿನ್ನುವುವಾದರೆ ಇನ್ನು ಕೆಲವು ಬಗೆಗಳು ಕಾಂಡಗಳನ್ನೂ ಕಾಯಿಗಳನ್ನೂ ಕೊರೆದು ಭಕ್ಷಿಸುವುವು.

	ಲಾರ್ವಗಳು ಕೆಲವು ಕಾಲಾನಂತರ ಭೂಮಿಯನ್ನು ಕೊರೆದು ಮಣ್ಣಿನ ಕೋಶಗಳನ್ನು ರಚಿಸಿಕೊಂಡು ಕೋಶಾವಸ್ಥೆಯನ್ನು ಸೇರುವುವು. ಪ್ಲೂಸಿಯ ಜಾತಿಯ ಲಾರ್ವಗಳು ಮಾತ್ರ ಎಲೆಗಳ ಮಧ್ಯೆ ಸೇರಿ ಗೂಡನ್ನು (ಕಕೂನ್) ಹೆಣೆದುಕೊಂಡು ಕೋಶಾವಸ್ಥೆಯನ್ನು ಆರಂಭಿಸುವುವು.

	ನಾಕ್ಟುಯಿಡೀ ಕುಟುಂಬದ ಉದಾಹರಣೆಗಳು: ಅಗ್ರೋಟಿಸ್, ಸಿರ್‍ಫಿಸ್, ಲ್ಯಾಫಿಗ್ಮ ಎಕ್ಸಿಗುವ, ಪ್ರೋಡೀನಿಯ ಲಿಟ್ಯುರ- ಇವು ಬತ್ತ, ಈರುಳ್ಳಿ, ಮೆಣಸಿನಕಾಯಿ, ಆಲೂಗೆಡ್ಡೆ, ಹೊಗೆಸೊಪ್ಪು ಮುಂತಾದ ಸಸ್ಯಗಳನ್ನು ತಿಂದು ಹಾಳುಗೈಯುತ್ತವೆ. ಹೀಲಿಯೋತಿಸ್ ಜಾತಿಯ ಪತಂಗಗಳ ಲಾರ್ವಗಳು ತೊಗರಿ, ಕಡಲೆ, ಹತ್ತಿ, ಟೊಮ್ಯಾಟೊ, ಮುಸುಕಿನ ಜೋಳಗಳ ಪಿಡುಗು ಎನಿಸಿವೆ. ಸ್ಟೋಡಾಪ್ಟರ, ಲ್ಯೂಕಾನಿಯ, ಯುಕ್ಸೋವ ಮುಂತಾದ ಇನ್ನಿತರ ಮುಖ್ಯ ಪತಂಗಗಳು. ಅಲ್ಲದೆ ಇದೇ ಕುಟುಂಬದ ಯೂಬ್ಲೆಮ ಅಮಾಬಿಲಿಸ್ ಎಂಬುದು ಅರಗಿನ ಕೀಟವಾದ ಲ್ಯಾಕ್ಸಿಫರ್ ಲ್ಯಾಕ ಎಂಬುದನ್ನು ತಿನ್ನುವುದರ ಮೂಲಕ ಅರಗು ಉತ್ಪಾದನೆಗೆ ಮಾರಕವಾಗಿದೆ.
(ಟಿ.ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ